Monday 19 December 2016

ಭವಿಷ್ಯದ ಭೂತ


ಕಡು ಕತ್ತಲ ನಡುವೆ ಹಚ್ಚಿದ
ಬೀಡಿಯ ಕೆಂಪು ಹೊಳಪಿನ ಕೆಳಗೆ
ದುರ್ಬಿನಿನ ಅಡಿ ಕೈ ನೋಡಿ ಹೇಳುತ್ತೇನೆ
" ಅಗೋ ... ಚಂದ್ರ ಮೂರನೇ ಮನೆಯಲ್ಲಿ ... "

ನನಗೂ ನಿನಗೂ ಬಹಳವೇನೂ ವ್ಯತ್ಯಾಸವಿಲ್ಲ ,
ಭವಿಷ್ಯದ ಕನ್ನಡಿಯಲಿ ಕಾಣುವುದು 'ಭೂತ'ವಷ್ಟೇ
ಮಿಕ್ಕಿದೆಲ್ಲಾ ನಾ ಮಾಡುವ ಕಪಿ ಚೇಷ್ಟೆ,
ನೀ ತಂದಿಡುವ ಕಾಸಿಗಾಗಿ ನಾ
ಕುದಿ ಕುದಿದು ಕಾಯುತ್ತೇನೆ,

ರಾತ್ರಿಯ ಮೌನದಲ್ಲೊಂದು ವಿಚಿತ್ರ ಗೌಪ್ಯವಿರುತ್ತದೆ,
ಬಾಗಿಲು ಬಾಗಿಲು ಸೀಳಿ , ಜುಟ್ಟು-ದಾಡಿಗಳ ಹಗೆಗೆ
ಹಿಡಿದ ಕತ್ತಿಯ ತುದಿಯಿಂದ ನೆತ್ತರ ಕೊಡಿ ಹರಿಸುವ
ಜನರಿರುವಾಗ, ನೀ ಕೇಳುವ
" ನನ್ನ ಭವಿಷ್ಯ ಹೇಗಿದೆ ? " ಎನ್ನುವ
ಪ್ರಶ್ನೆಗೆ ಉತ್ತರ ಹೇಳುವುದಕ್ಕೆ
ನನಗೆ ಭಯವಿದೆ ,

ಜೇಬಲ್ಲಿ ಕಾಸಿಲ್ಲದ, ಒಲೆಯಲ್ಲಿ ಕೂಳಿಲ್ಲದ,
ನೋಟು-ಬಂದಿಯ ಬೇಲಿಗೆ ಸಿಕ್ಕು
ಹರಿದು ಛಿದ್ರವಾದ ಬಾಳಿನ
ನೀ ಕೇಳುವ , " ಅಯ್ಯನೋರೇ ... ಭವಿಸ್ಯ ಎಂಗದೆ ? "
ಎನ್ನುವ ಪ್ರಶ್ನೆಗೆ ಉತ್ತರಿಸಲು
ನನಗೆ ಭಯವಿದೆ,

"gutter" ನ ಗಟಾರದಲ್ಲಿ ಮೂಗುಮುಚ್ಚಿ
ಮೂರು ಸುತ್ತು ಮುಳುಗೆದ್ದು,
ಚಂದ್ರ , ಸೂರ್ಯ ,ರಾಹುಗಳ ಲೆಖ್ಖ ಹಾಕಿ
ಹೇಳುತ್ತೇನೆ ಏನೋ, ಮೇಲಿನವನ ಮೇಲೆ ಭಾರ ಹಾಕಿ
ಏಕೆಂದರೆ ,
ಕಾದ ಹೊಟ್ಟೆಯ ಕಾವಲಿಯ ಮೇಲೆ ನೀ ಕೊಡುವ ಕಾಸಿನದೇ ದೋಸೆ