Friday 29 May 2015

ಸ್ಥಾನ

'ಅವಧಿ' ಯಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ "ಸ್ಥಾನ" 

ಸ್ಥಾನ 

ಅಂದು ಭಾನುವಾರ. ಬೆಳಗ್ಗೆ ಮನೆಯಿಂದ ಹೊರಬಿದ್ದು, ಸೀದಾ, ತನ್ನ ಅಡಿಕೆ ತೋಟದ ಕಡೆ ಶಾಮಣ್ಣ ಹೊರಟ. ಊರ  ಬಸ್ ಸ್ಟಾಪಿನಿಂದ ನೇರ ಕೆಳಗೆ ಒಂದು ಮೈಲಿ ನಡೆದು, ಅನಂತರ ಕಾಲುದಾರಿಯ ಹತ್ತು ನಿಮಿಷದ ನಡಿಗೆಗೆ ಶಾಮಣ್ಣನ ಹತ್ತು ಎಕರೆಯ ಅಡಿಕೆ ತೋಟ ಸಿಗುತ್ತದೆ. ಮಳೆಗಾಲ ಆಗ ತಾನೇ ಆರಂಭವಾಗಿತ್ತು. ಸಣ್ಣಗೆ ಜಿನುಗುವ ಜಡಿಮಳೆಯಲ್ಲಿ  ಕೊಡೆ ಹಿಡಿದು, ಶುಭ್ರವಾದ ಬಿಳಿ ಪಂಚೆಯನ್ನು ಮೇಲಕ್ಕೆ ಕಟ್ಟಿ, ಹೆಗಲ ಮೇಲೊಂದು ಪಾಣಿಪಂಚೆಯ ಹಾಕಿ ಈ ಜಗತ್ತಿಗೇ ಸಲ್ಲದವನಂತೆ ಎಲ್ಲೋ ಧ್ಯಾನಮಗ್ನನಾಗಿ ನಡೆದು ಬರುತ್ತಿದ್ದ ಶಾಮಣ್ಣನನ್ನು  ಶ್ರೀನಿವಾಸ ತಡೆದು, "ಏನ್ ಶಾಮ.. ತೋಟದ ಕಡೆಗಾ... ಇಕಾ.. ಪೇಪರ್ ತಗೋ ... "ಎಂದು ಬೆಳ್ಳಂಬೆಳಗ್ಗೆಯೇ ಹೊಗೆಸೊಪ್ಪು ತುಂಬಿದ ಬಾಯಿಯಿಂದ ಅದು ಸೋರದಂತೆ ಕಷ್ಟ ಪಟ್ಟು ಮಾತನಾಡುತ್ತಾ,  ಸುರುಳಿ ಸುತ್ತಿ ಕೈಲಿಟ್ಟುಕೊಂಡಿದ್ದ ಪೇಪರನ್ನು ಕೊಡಲು ಮುಂದೆ ಬಂದ. ಶ್ರೀನಿವಾಸ ಗೊಬ್ಬರದ ವ್ಯಾಪಾರಿ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಒಂದೇ ಗೊಬ್ಬರದ ಅಂಗಡಿಯಾದ್ದರಿಂದ, ಸುತ್ತಲಿನ ಹತ್ತು ಹಳ್ಳಿಯ ರೈತರು ದೂರ್ವೆಹಳ್ಳಿಗೆ ಬಂದು, ಇವನ ಅಂಗಡಿಯಿಂದಲೇ ಗೊಬ್ಬರ ಖರೀದಿಸಬೇಕಾಗಿತ್ತು. ಇವನು ಒಂದಕ್ಕೆ ನಾಲ್ಕು ಬೆಲೆ ಹೇಳಿದರೂ ಯಾರೂ ತುಟಿಕ್-ಪಿಟಿಕ್ ಅನ್ನುವಂತೆ ಇರಲಿಲ್ಲ. ಇವನ ಮೇಲೆ ಆಗಲೇ ಹತ್ತು ಹಲವು ಕಂಪ್ಲೇಂಟ್ ಬರೆದು ತಹಸೀಲ್ದಾರರಿಗೆ ಕೊಟ್ಟು ಬಂದಿದ್ದರೂ ಯಾವುದೇ ಪ್ರಯೋಜನವೂ ಆಗಿದ್ದಿರಲಿಲ್ಲ. ಊರಿಗೊಬ್ಬಳೇ ಪದ್ಮಾವತಿಯಂತಿತ್ತು ಅವನ ಅಂಗಡಿ. ಇದರೊಟ್ಟಿಗೆ news paper ಹಂಚುವ ಬ್ಯುಸಿನೆಸ್ಸೂ ಮಾಡುತ್ತಿದ್ದ. ಸುಮಾರು ೯ ಘಂಟೆಗೆ ಬರುವ ಮಾರ್ನಿಂಗ್ ಬಸ್ಸಿನಲ್ಲಿ ಸಕಲೇಶಪುರದಿಂದ ಪೇಪರ್ ತರಿಸಿ ಇಲ್ಲಿ ಎಲ್ಲರಿಗೂ ೫೦ ಪೈಸೆ ಹೆಚ್ಚಿನ ಬೆಲೆಗೆ ಹಂಚುತ್ತಿದ್ದ. ಶಾಮಣ್ಣನೂ ಶ್ರೀನಿವಾಸನೂ 'ಚಡ್ಡಿ ದೋಸ್ತಿ'ಗಳು. ಇಬ್ಬರೂ ಇಂಟರ್ಮೀಡಿಯೇಟ್ ವರೆಗೆ ಒಟ್ಟಿಗೆ ಓದಿದವರು. ಶಾಮಣ್ಣ ಪಾಸಾಗಿ ದೂರ್ವೆಹಳ್ಳಿಯಲ್ಲಿ ಆಗ ತಾನೇ ಆರಂಭವಾಗಿದ್ದ ಶಾಲಿಯಲ್ಲಿ ಮೇಷ್ಟರಾದ. ಕಗ್ಗಾಡಿನ ಮೂಲೆಯಾದ ಈ ದೂರ್ವೆಹಳ್ಳಿಗೆ ಯಾರೂ ಮೇಷ್ಟರಾಗಿ ಬರಲು ತಯ್ಯಾರಿರಲಿಲ್ಲ. ಆದ್ದರಿಂದ ಇವನ ಕೆಲಸ ಸಲೀಸಾಗಿ ಆಗಿಹೋಯಿತು. ಆದರೆ ಏನೇ ಸಾಹಸ ಮಾಡಿದರೂ ಶ್ರೀನಿವಾಸನಿಗ ಇಂಗ್ಲೀಷಿನಲ್ಲಿ ಪಾಸಾಗಲು ಸಾಧ್ಯವಾಗದ್ದರಿಂದ, ತಂದೆಯಿಂದ ವರದಂತೆ ಬಂದ  ಅಂಗಡಿಯನ್ನು ನೋಡಿಕೊಳ್ಳಲು ಆರಂಭಿಸಿದ.

ಶಾಮಣ್ಣ, "ಇಲ್ಲ ಸೀನು... ತೋಟದಿಂದ ವಾಪಸ್ ಬರ್ತಾ ಇಸ್ಕೊತೇನೆ... "ಎಂದು ಹೇಳಿ ತೋಟದ ಕಡೆಗೆ ಹೋರಟ. ನಿನ್ನೆ ಬಂದ ಪತ್ರದ ಗುಂಗು ಇನ್ನೂ ಮಾಸಿರಲಿಲ್ಲ. ಇದ್ದ ಒಬ್ಬ ಮಗ ಹೀಗೆ ಮಾಡಿಕೊಂಡನಲ್ಲಾ... ಎಂಬುದೇ ಶಾಮಣ್ಣನ ಚಿಂತೆಯಾಗಿತ್ತು. ಇನ್ನು ಊರಿನವರ ಮುಂದೆ ಹೇಗೆ ಮುಖ ತೋರಿಸಲಿ ಎನ್ನುವುದೇ ಗೊತ್ತಾಗದ ವಿಷಯವಾಗಿತ್ತು ಶಾಮಣ್ಣನಿಗೆ. ಅವನ ಮಗ ಸಿದ್ಧಾರ್ಥ ಬೆಂಗಳೂರಿನಲ್ಲಿ ಇಂಜಿನೀರಿಂಗ್ ಮುಗಿಸಿ ಅಲ್ಲೇ  ಒಂದು ಮಲ್ಟಿನ್ಯಾಷಿನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಾಮಣ್ಣನಿಗೆ ಮಗನನ್ನು ಇಂಜಿನಿಯರ್ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಊರಿನಲ್ಲಿ ತನಗೊಂದು ಸ್ಥಾನ-ಮಾನ, ಗೌರವ  ತಂದುಕೊಡುತ್ತಾನೆ ಎಂಬ ಕಾರಣವೂ ಹೌದು. ಆದರೆ, ಸಿದ್ಧಾರ್ಥನಿಗೆ ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯದ ಮೇಲೆ ಆಸಕ್ತಿ. ಲಾರೆನ್ಸ್, ಬ್ಲೇಕ್, ರೇಮಂಡ್ ವಿಲ್ಲಿಯಮ್ಸ್ ರಂತಹ ಹೊಸಕಾಲದ ಚಿಂತಕರ ಪುಸ್ತಕಗಳನ್ನು ಓದಿ "ಅಣ್ಣಾ... ನೀವು ಹೀಗೆ ಪ್ರತಿ ದಿನ ನಿಂಗಿಗೆ ಹಿತ್ತಲಿನಲ್ಲಿ ನಿಲ್ಲಿಸಿ ಕಾಫಿ ಕೊಡ್ತೀರ.. ಇದು ತಪ್ಪು.. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು ... "ಎಂದು ವಿರೋಧಿಸುತ್ತಿದ್ದ. ದಿನೇ ದಿನೇ ಅವನ ವ್ಯಕ್ತಿತ್ವ ಒಬ್ಬ ಕ್ರಾಂತಿಕಾರಿಯಾಗುವತ್ತ ಜಾರುತ್ತಿತ್ತು. 'ಇದೇನಾದರೂ ಹೀಗೆಯೇ ಮುಂದುವರೆದರೆ ನನ್ನ ಗತಿಯೇನು? ... ಇವನು ಯಾವುದೊ ಜಾತಿಯವಳನ್ನು ಕಟ್ಟಿಕೊಂಡರೆ, ಊರಿನವರ ಮುಂದೆ ಮುಖ ಸಣ್ಣಗಾಗುವುದಲ್ಲಾ... ರಾಮೋತ್ಸವದ ಸಮಯದಲ್ಲಿ ರುದ್ರಾಭಿಷೇಕಕ್ಕೆ, ವೇದ ಪಾರಾಯಣಕ್ಕೆ,  ಸಂಜೆ ಮಂಗಳಾರತಿಗೆ ನನ್ನನ್ನು ಯಾರೂ ಕರೆಯುವುದಿಲ್ಲ.. ಅದರೊಟ್ಟಿಗೆ, ಎಲ್ಲರ ಮುಖ... ಮುಖದ ಹಿಂದಿನ ಮಾತು... ಒಂದು ರೀತಿಯ ಅಲಿಖಿತ ಬಹಿಷ್ಕಾರ ... ' ಎಂದು ಶಾಮಣ್ಣ ಯೋಚಿಸುತ್ತಿದ್ದ. 'ಹೇ.. ಇವನು ಇನ್ನೂ ಚಿಕ್ಕವನು... ಯೌವ್ವನದ ಭರ... ಹೀಗಾಡುತ್ತಾನೆ... ನಾನೊಬ್ಬ ಮದುವೆಯವರೆಗೂ ಹೋದೆ...  'ಎಂದುಕೊಂಡು ಸುಮ್ಮನಾಗುತ್ತಿದ್ದ.  ಆದರೆ, ಮನಸ್ಸಿನ ಮೂಲೆಯಲ್ಲಿ ಕೂತಿದ್ದ ಆ ವಿಚಾರ ಮತ್ತೆ ಮತ್ತೆ ಅವನನ್ನು ಕಾಡುತ್ತಲೇ ಇತ್ತು.

ಇದೇ ವೇಳೆಗೆ ಸರಿಯಾಗಿ ಸಿದ್ಧಾರ್ಥನ ಸೆಕಂಡ್ ಪಿ. ಯು ಪರೀಕ್ಷೆಯ ರಿಸಲ್ಟ್ ಕೂಡ ಬಂತು. ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದನಲ್ಲದೆ ಸಿ. ಇ. ಟಿ ಯಲ್ಲಿ ಉತ್ತಮ ರಾಂಕ್ ಗಳಿಸಿದ್ದ. ಇದೇ ಸರಿಯಾದ ಸಮಯವೆಂದೂ, ಅವನ ಮನಸ್ಸು ಬೆಂಗಳೂರಿಗೆ ಹೋದರೆ ಬದಲಾಗುತ್ತೆ ಎಂದೂ , ಅವನನ್ನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿ , ತನ್ನ ಸಂಬಂಧಿ ವೆಂಕಟೇಶನ ಮನೆಯ ಮೇಲಿನ ಒಂದು ರೂಮ್ ಖಾಲಿ ಇದ್ದರಿಂದ, ಅಲ್ಲೇ ಅವನಿಗೆ ಉಳಿದುಕೊಳ್ಳಲೂ ಅವಕಾಶ ಕಲ್ಪಿಸಿದ ಶಾಮಣ್ಣ . ಈಗ ಸಿದ್ಧಾರ್ಥನ ವಿರೋಧಕ್ಕೆ ಮುಲಾಮು ಹಚ್ಚುವಂತೆ, ತನ್ನ ಎಲ್ಲಾ ಸಂಬಂಧಿಗಳಿಂದಲೂ ಉಪದೇಶ ಮಾಡಿಸಿದ. "ನೋಡು ಸಿದ್ಧಾರ್ಥ... ಈ ಸಾಹಿತ್ಯ .. ಅದು ಇದು ಎಲ್ಲಾ ಹೊಟ್ಟೆ ತುಂಬಿಸಲ್ಲ ಕಣೋ... ಅದನ್ನು ನೋಡು ಮೊದಲು... ಆಮೇಲೆ ಈ ಸಾಹಿತ್ಯ, ಕ್ರಾಂತಿ ಎಲ್ಲ .. ", "ಸಿದ್ದು... ಇಂಜಿನಿಯರಿಂಗ್ ಓದ್ತಾನೆ ಸಾಹಿತ್ಯಾಭ್ಯಾಸ ಮಾಡಬಹುದು ಕಣೋ.. ಅದಕ್ಕೊಂದು ಡಿಗ್ರಿ ಬೇರೆ ಬೇಕ ? "... ಎಂದು ಸಾಹಿತ್ಯದ ಗಂಧ- ಗಾಳಿ ಗೊತ್ತಿಲ್ಲದ ಎಲ್ಲರೂ ಪ್ರಖಾಂಡ ವಿಮರ್ಶಕರಂತೆ ಅವನಿಗೆ ಸಾಹಿತ್ಯದ ಕಲಿಕೆಯ ಮೇಲೆ ಬೋಧನೆ ಮಾಡಿ ಒಲ್ಲದ ಮನಸ್ಸಿನ ಅವನನ್ನು ಬೆಂಗಳೂರಿಗೆ ಕಳುಹಿಸಿದರು.

ಇತ್ತ ಶಾಮಣ್ಣನಿಗೆ ಸಿದ್ಧಾರ್ಥ ನಿಜವಾಗಿಯೂ ಬದಲಾಗುವನೇ? ಎಂಬ ಸಂಶಯ ಒಂದು ಕಡೆಯಾದರೆ, ಅವನ ಆಸೆ ಚಿಗುರುವ ಮೊದಲೇ ಚಿವುಟಿ ಹಾಕಿಬಿಟ್ಟೆನಲ್ಲ ಎನ್ನುವ ಪಾಪಪ್ರಜ್ಞೆ ಇನ್ನೊಂದು ಕಡೆ ಕಾಡತೊಡಗಿತು. ಆದರೆ, ಅವನ ಮಾತು ನೆನೆಸಿಕೊಂಡ ತಕ್ಷಣವೇ ಊರಿನವರ, ಸಂಬಂಧಿಕರ ಮುಖ, ನಿಂಗಿ, ತೋಟ, ಸೀನ, ರಾಮೋತ್ಸವ, ರುದ್ರಾಭಿಷೇಕ, ಪ್ರಸಾದ.... ಎಲ್ಲಾ ನೆನಪಿಗೆ ಬಂದು ತಲೆ ತಿರುಗಿದಂತಾಗಿ ಆ ಯೋಚನೆಯನ್ನೇ ಮರೆಯಲು ಪ್ರಯತ್ನಿಸತೊಡಗಿದ. ಇವನ ಯೋಚನೆಗೆ ಪುಷ್ಟಿ ನೀಡುವಂತೆ ಶಾಮಣ್ಣ ಕ್ಲಾಸಿನಲ್ಲಿ ಪಾಠ ಮಾಡುವಾಗ "ಸಮಾನತೆ.. ಪ್ರತಿಯೊಬ್ಬರ ಹಕ್ಕು... ನಮ್ಮ ಸಂವಿಧಾನ ಸಮಾನತೆ ಸಾರುತ್ತದೆ .. "ಎನ್ನುವಾಗ ನಿಂಗಿಯ ನೆನಪು ಆಗದೇ ಇರುವುದಿಲ್ಲ. ಮಾಯಾನಗರಿ ಬೆಂಗಳೂರಿನ ಮಾಯೆಯ ಮಡಿಲಿನಲ್ಲಿ ಬಿದ್ದ ಸಿದ್ಧಾರ್ಥ, ಹಳ್ಳಿಯಲ್ಲಿ ಬೆಳೆಸಿಕೊಂಡ ಎಲ್ಲ ಸಿದ್ಧಾಂತಗಳನ್ನೂ ಮರೆಯತೊಡಗಿದ. ಅವನಿಗೆ ಲಾರೆನ್ಸ್, ಕೀಟ್ಸ್ ಗಿಂತ Infosys, Microsoft  ಹೆಚ್ಚು ಪ್ರಿಯವಾದ ಶಬ್ದಗಳಾದವು. ಎಂದೋ ಊರಿಗೆ ಬಂದವನು, "ಅಣ್ಣಾ... ಎಲ್ಲ materialistic world ಅಣ್ಣ.. ನೋಡು ಚೀನಾ, ಜಪಾನ್, US, ಎಲ್ಲರ GDP ಹೇಗೆ ಮೇಲೆ ಹೋಗ್ತಾ ಇದೆ.. ನಾವು ಅವರನ್ನ ಬೀಟ್ ಮಾಡ್ಬೇಕು ಅಂದ್ರೆ ಈ ಹಾಳು agriculture ನಂಬಿಕೊಂಡರೆ ಆಗಲ್ಲ... ನೋಡು .. ನೀನೂ ತೋಟವನ್ನ ಯಾರಿಗಾದರೂ ಮಾರಿಬಿಡು.. Waste land... " ಎಂದು ಹೇಳಿದ್ದ. ಆಗ ಶಾಮಣ್ಣನಿಗೆ ಒಂದು ವಿಚಿತ್ರ ಅನುಭವವಾಗಿತ್ತು. ಈಗ ಮತ್ತೊಂದು ಥರದ ಚಕ್ರದೊಳಗೆ ಮಗ ಸಿಕ್ಕಿಹಾಕಿಕೊಳ್ಳುತಿದ್ದಾನೆ ಎಂದು ಭಯವಾಗತೊಡಗಿತು. ಇದೆಲ್ಲಾ ಸರಿಹೋಗಬೇಕಾದರೆ ಒಂದೇ ಉಪಾಯ. ಮಗನಿಗೆ ಮದುವೆ ಮಾಡುವುದು... ಶಾಮಣ್ಣನೂ ತನ್ನ ಭಾವಮೈದುನ  ರಮೇಶನೂ ಸಕಲೇಶಪುರಕ್ಕೆ ಹೋಗಿ, ರಮೇಶನ ಹೆಂಡತಿಯ ಕಡೆ ಒಂದು ಸಂಬಂಧವನ್ನು ಕುದುರಿಸಿ ಬಂದಿದ್ದರು. ಅದನ್ನು ಹೇಳಲೆಂದು ಫೋನ್ ಮಾಡಿದಾಗ ಒಂದು ರಾಮಾಯಣವೇ ನಡೆದುಹೋಗಿತ್ತು.  ಮದುವೆಯನ್ನು ಖಡಾಖಂಡಿತವಾಗಿ ವಿರೋಧಿಸಿದ ಸಿದ್ಧಾರ್ಥನಿಗೆ ಶಾಮಣ್ಣನೂ ಸ್ವಲ್ಪ ಏರಿದ ದನಿಯಲ್ಲೇ ಹೇಳಿದ್ದ... ' ಮದುವೆ ಅನ್ನೋದು ನಿನ್ನ ಒಬ್ಬನ ನಿರ್ಧಾರವಲ್ಲ ಕಣೋ... ಎರಡು ಕುಟುಂಬಗಳ ಮಿಲನಕ್ಕೆ ಒಂದು ನೆವ ಅಷ್ಟೇ ... ನಾವು ಸಂಪ್ರದಾಯ, ಎಲ್ಲ ಬಿಟ್ಟು ನೀ ಹೇಳ್ದಾಗೆಲ್ಲ ಕುಣಿಯಕ್ ಆಗಲ್ಲ ಕಣೋ ... ನಾವು ಹೇಳಿದ್ದನ್ನು ಕೇಳು ಮೊದಲು ... .. ತುಂಬಾ ಒಳ್ಳೆ ಹುಡುಗಿ ಕಣೋ ... ' ಎಂದೆಲ್ಲಾ ಒಲ್ಲದ ಅವನಿಗೆ ಹೇಳಿದ್ದರು. ಇತ್ತ ಸಿದ್ಧಾರ್ಥ, ' ಸಂಪ್ರದಾಯ, ಸ್ಥಾನ ... ಅದು ಇದು ಹೇಳ್ಕೊಂಡು ಯಾರನ್ನೋ ಹೇಗೆ ಕಟ್ತಾರೆ ... ಎರಡು ದಿನ ಮುಖ ನೋಡಿದ್ರೆ ಹೇಗೆ ಗೊತ್ತಾಗತ್ತೆ, ಒಳ್ಳೆಯವಳು  ಅಂತ ... '. ಎಂದು ಕೈ ಕೈ ಹಿಸುಕಿಕೊಂಡ.  ಕೆಲಸ ಸಿಕ್ಕಿದ ಮೇಲಂತೂ ತಿಂಗಳಿಗೆ ಒಮ್ಮೆಯಾದರೂ ಕಾಣುತಿದ್ದ ಸಿದ್ಧಾರ್ಥನ ಮುಖ, ಈಗಂತೂ ಕಾಣುವುದೇ ಅಪರೂಪ. ಏನೋ ಕೆಲಸ, ಅದು ಇದು  ಅನ್ನುತ್ತಾನೆ... ಈಗ ಈ  ಪತ್ರ ....

"ಶಾಮ ... ನಿಂತ್ಕೋ "ಶ್ರೀನಿವಾಸ ಕೂಗಿದ. ಬಳಿಗೆ ಬಂದು ಮೆಲುದನಿಯಲ್ಲಿ "ನನ್ನ ಮಗನಿಗೆ ಮದುವೆ settle ಆಯ್ತು ಕಣೋ... ಮೈಸೂರಿನವಳು ಹುಡುಗಿ.. ಅವಳೂ ಇಂಜಿನಿಯರ್ .. ನೀನು ತೋಟದಿಂದ ಬಾ .. ಆಮೇಲೆ ಮಾತಾಡೋಣ.. ಬಹಳ ಶ್ರೋತ್ರೀಯರ ಕುಟುಂಬ.. ಎಲ್ಲರೂ ಒಳ್ಳೆಯವರು ಕಣೋ ಮನೇಲಿ... ಇನ್ನೂ ಯಾರಿಗೂ ಹೇಳಿಲ್ಲ.. ನೀ ಬಾ.. ಆಮೇಲೆ ಸಿಕ್ತೀನಿ ... "ಎಂದು ಛತ್ರಿ ಸರಿಪಡಿಸಿಕೊಂಡು ಶ್ರೀನಿವಾಸ ಬೆನ್ನು ತಿರುಗಿಸಿ ನೆಟ್ಟ ನಡೆಯ ತೊಡಗಿದ. ಅವನ ಮುಖದಲ್ಲಿ ಗೆದ್ದ ಹುಂಜನ ತರಹದ ನಿಲುವಿತ್ತು, ಏನನ್ನೋ ಸಾಧಿಸಿದ ಮಂದಹಾಸವಿತ್ತು. ಶಾಮಣ್ಣನಿಗೆ  'ನೀನೇ ಹುಡುಕಿದೆಯೋ .. ಅಥವಾ .. ಅವನೇ .. 'ಎನ್ನುವ ಮಾತು ಗಂಟಲಿನಲ್ಲೇ ಸಿಕ್ಕು ಸತ್ತುಹೋಗಿತ್ತು. ಶರ್ಟಿನ ಜೇಬಿನಲ್ಲಿದ್ದ ಪತ್ರವನ್ನು ಮತ್ತೆ ತೆಗೆದು ನೋಡಿದ. ಮಳೆ ಜೋರಾಗಿ ಹೊಯ್ಯಲು ಆರಂಭವಾಯಿತು. ಅದನ್ನು ಲೆಕ್ಕಿಸದೇ ನಡು ಬೀದಿಯಲ್ಲಿ ಕಲ್ಲಾಗಿ ನಿಂತು ಪತ್ರ ಓದತೊಡಗಿದ. ಎಲ್ಲಾ ಸಾಲುಗಳನ್ನು ಓದಲು ಧೈರ್ಯ ಸಾಲದೇ ಹೋಯ್ತು. 'ಅಣ್ಣಾ... Rose ತುಂಬಾ ಒಳ್ಳೆಯವಳು. ಅವಳ ತಂದೆಯೂ ಅಷ್ಟೇ. ತುಂಬಾನೇ ದೊಡ್ಡ Industrialist.. ನಮ್ಮ ದೇಶದ ಬೆಳವಣಿಗೆ ಇಂತಹ ದೊಡ್ಡ ಮನುಷ್ಯರಿಂದಲೇ ಸಾಧ್ಯ.. ಅವರದ್ದೇ ಆದ ಒಂದು consultancy ಇದೆ... ನಾನೂ ಅವಳೂ  ... ' ಮುಂದೆ ಓದಲಾಗಲಿಲ್ಲ. ಹಾಗೆಯೇ ಕಣ್ಣು ಮುಚ್ಚಿ ನಿಂತ. ಅತ್ತ ಕಡೆಯಿಂದ ಬರುತಿದ್ದ ಗೊರವ, "ಬುದ್ಧಿ ... ಇದೇನ್ ಹಿಂಗ್ ನಿಂತ್ಬುಟ್ರಲ್ಲ ... ಅಲ್ಲಿ ರೈಟರ್ ರಾಮಣ್ಣಪ್ಪ ನಿಮ್ಗೇ ಕಾಯ್ತಾ ಅವ್ರೆ... ನಿಮ್ಮುನ್ನ ಕರ್ಕೋ ಬಾ ಅಂತ ಕಳುಸುದ್ರು .. ಬಿರ್ ಬಿರ್ನೆ ಬನ್ನಿ ."ಎಂದ. ಅವಾಕ್ಕಾಗಿ ಎಚ್ಚರಗೊಂಡವನಂತೆ ಶಾಮಣ್ಣ, "ಹಾ !!!  ಗೊರವ... ಇವತ್ತು ಬರೋಕ್ಕೆ ಆಗಲ್ಲ ನನಗೆ.. ಮೈಗೆ ಹುಷಾರಿಲ್ಲ ಅಂತ ಹೇಳೋ .. "ಎಂದು ಹೇಳಿ ಅವನ ಉತ್ತರಕ್ಕೂ ಕಾಯದೆಯೇ ಛತ್ರಿ ಹಿಡಿದು ನಡೆದೇಬಿಟ್ಟ. ಗೊರವನಿಗೆ ಏನೂ ಹೊಳೆಯದೇ, "ಇದೇನ್ ಈ ವಯ್ಯ ... ಇಲ್ಲೀಗಂಟ ಬಂದು ತ್ವಾಟ್ಕೆ ಬರಾಕಿಲ್ಲ ಅಂತದೆ ... "ಎಂದು ಗೊಣಗುತ್ತಾ ತೋಟದ ಕಡೆಗೆ ಹೆಜ್ಜೆ ಹಾಕಿದ.

ಶಾಮಣ್ಣ ಮನೆಗೆ ಬಂದವನೇ, ಛತ್ರಿ ಮಡಿಸಿ ಪಡಸಾಲೆಯಲ್ಲಿಟ್ಟು  ಅಲ್ಲೇ ಇದ್ದ ಕುರ್ಚಿಯ ಮೇಲೆ ಧೊಪ್ಪೆಂದು ಕೂತ. 'ತಾನು ಮಾಡುತ್ತಿರುವುದು ಸರಿಯೇ? ಅವನ ಇಷ್ಟಕ್ಕೆ ಅವನ ಮದುವೆ ಆಗುವುದರಲ್ಲಿ ತಪ್ಪೇನಿದೆ. ಅವನ ಜೀವನ ಸಂಗಾತಿ ಹುಡುಕಿಕೊಳ್ಳುವುದು ಅವನ ಹಕ್ಕಲ್ಲವೇ ... ' ಎಂದೆಲ್ಲಾ ಯೋಚಿಸಿದರೂ, ತಲೆಯಲ್ಲಿ ಮತ್ತೆ ಅದೇ... ರುದ್ರಾಭಿಷೇಕ, ರಾಮೋತ್ಸವ, ಸೀನನ ಮಗನ ಮದುವೆ, ಪ್ರಸಾದ, ಮಂಗಳಾರತಿ ....  ದೊಂಬರಾಟ.  ಅದನ್ನು ಎಷ್ಟೇ ಬಾರಿ ತೊಡೆದುಹಾಕಲು ಪ್ರಯತ್ನ ಪಟ್ಟರೂ ಹೋಗುತ್ತಲೇ ಇರಲಿಲ್ಲ.  ಅಷ್ಟರಲ್ಲೇ, "ಅಯ್ಯನೋರೆ ... "ಎಂದು ಯಾರೋ ಕೂಗಿದಂತಾಯ್ತು. "ಯಾರೂ ... "ಎಂದು ಒಳಗಿನಿಂದ ಇವೆಲ್ಲ ಏನೂ ತಿಳಿಯದ ಶಾಮಣ್ಣನ ಹೆಂಡತಿ ಭಾಗೀರಥಿ ಕೂಗುತ್ತಾ, ಅಡಿಗೆ ಮನೆಯಿಂದ ಸೆರಗಿನಿಂದ ಕೈ ಒರೆಸಿಕೊಳ್ಳುತ್ತಾ ಹೊರಬಂದಳು. "ಓ.. ನಿಂಗಿ ... ಹಿತ್ತಲ ಕಡೆ ಬಾ.. ಕಾಫಿ ಕೊಡ್ತೀನಿ ... ಸ್ವಲ್ಪ ಕೊಟ್ಟಿಗೆ ಕೆಲಸ ಇದೆ.  ಮಾಡೋವಂತೆ... "ಎನ್ನುತ್ತಾ ಒಳನಡೆದಳು. ಶಾಮಣ್ಣ ಮೌನವಾಗಿ ಧ್ಯಾನಸ್ಥನಾದಂತೆ ಕುಳಿತ.